 ಬೆಕೆಟ್, ಸ್ಯಾಮ್ಯುಯೆಲ್ ಬಾಕೆರ್ಲ್‌

ಬೆಕೆಟ್, ಸ್ಯಾಮ್ಯುಯೆಲ್ ಬಾಕ್ರ್ಲೆ
1906-. ಪ್ರಸಿದ್ಧ ನಾಟಕಕಾರ, ಕಾದಂಬರಿಕಾರ, ಐರ್ಲೆಂಡ್ ದೇಶದವನಾದರೂ ಬರೆದದ್ದು ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ. ಮಾತೃಭಾಷೆಯಾದ ಐರಿಷ್‍ನಲ್ಲಿ ಒಂದು ಕೃತಿಯನ್ನು ರಚಿಸಿಲ್ಲ. ಡಬ್ಲಿನ್ ಸಮೀಪದ ಫಾಕ್ಸ್‍ರಾಕ್ ಎಂಬ ಊರಿನ ಪ್ರಾಟೆಸ್ಟೆಂಟ್ ಕ್ರೈಸ್ತ ಪಂಗಡಕ್ಕೆ ಸೇರಿದ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ. ಎನ್ನಿಸ್ ಕಿಲ್ಲಿನ್‍ನ ಪೋರ್ಟೋರಾ ರಾಯಲ್ ಸ್ಕೂಲಿನಲ್ಲಿ ಅನಂತರ ಆಸ್ಕರ್‍ವೈಲ್ಡ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿ ಡಬ್ಲಿನ್ನಿನ ಟ್ರಿನಿಟಿ ಕಾಲೇಜಿಗೆ ಸೇರಿದ. ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ವಿಶೇಷ ವ್ಯಾಸಂಗ ನಡೆಸಿ 1927ರಲ್ಲಿ ಬಿ.ಎ. ಪದವೀಧರನಾದ. ಬೆಲ್ಫಾಸ್ಟ್ ಕ್ಯಾಂಪ್‍ಬೆಲ್ ಕಾಲೇಜಿನಲ್ಲಿ ಕೆಲವು ಕಾಲ ಇಂಗ್ಲಿಷ್ ಅಧ್ಯಾಪಕನಾಗಿದ್ದು 1928-30ರ ಅವಧಿಯಲ್ಲಿ ಪ್ಯಾರಿಸ್ಸಿನ ನಾರ್ಮಲ್ ಸುಪೀರಿಯರ್ ಸ್ಕೂಲಿನಲ್ಲಿ ಇಂಗ್ಲಿಷ್ ಬೋಧಕನಾಗಿ ಕೆಲಸ ಮಾಡಿದ. ಅನಂತರ ಡಬ್ಲಿನ್‍ನ ಟ್ರಿನಿಟಿ ಕಾಲೇಜಿನಲ್ಲಿ ಫ್ರೆಂಚ್ ಅಧ್ಯಾಪಕನಾದ. 1930ರಲ್ಲಿ ಈತನ ಮೊದಲ ಕವನ ಸಂಕಲನ ವ್ಹೂರೋಸ್ಕೋಪ್ ಪ್ರಕಟವಾಯಿತು. 1931ರಲ್ಲಿ ಡಬ್ಲಿನ್ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಸುವರ್ಣಪದಕ ಸಮೇತ ಪಡೆದ. 1932ರಲ್ಲಿ ಪುನಃ ಫ್ರಾನ್ಸಿಗೆ ಹೋಗಿ ಪ್ಯಾರಿಸ್ಸಿನಲ್ಲಿ ನೆಲೆಸಿದ. 1932-36ರ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಯೂರೊಪ್ ದೇಶಗಳ ಆದ್ಯಂತ ಪ್ರವಾಸ ಮಾಡಿದ. 1934ರಲ್ಲಿ ಸಣ್ಣ ಕಥಾಸಂಕಲನವೊಂದನ್ನು ಪ್ರಕಟಿಸಿದ. 1936ರಲ್ಲಿ ಎಕೋಸ್ ಬೋನ್ಸ್ ಅಂಡ್ ಅದರ್ ಪ್ರಿಸಿಪಿಟೇಟ್ಸ್ ಎಂಬ ಎರಡನೆಯ ಕವನ ಸಂಕಲನ ಹೊರತಂದ.

	1929ರಲ್ಲೇ ಯೂಜಿನ್ ಜೋಲಾನ ಜೊತೆಯಲ್ಲಿ ಜೇಮ್ಸ್ ಜಾಯ್ಸ್ ಕುರಿತ ವಿಮರ್ಶಾ ಪ್ರಬಂಧಗಳನ್ನು ಸಂಪಾದನೆ ಮಾಡಿದ್ದ. 1931ರಲ್ಲಿ ಎ ಸ್ಟಡಿ ಆಫ್ ಪ್ರೌಸ್ಟ್ ಎಂಬ ಸಾಹಿತ್ಯಾಧ್ಯಯನ ಗ್ರಂಥ ರಚಿಸಿದ. 1932ರಲ್ಲಿ ಪ್ಯಾರಿಸ್ಸಿನಲ್ಲಿರುವಾಗ ಜೇಮ್ಸ್‍ಜಾಯ್ಸ್‍ನ ಕಾರ್ಯದರ್ಶಿಯೂ ಆಗಿದ್ದ. ಜಾಯ್ಸ್ ಬಗ್ಗೆ ತುಂಬ ಮೆಚ್ಚುಗೆಯಿದ್ದರೂ ಆತನ ಪ್ರಭಾವಕ್ಕೆ ಒಳಗಾಗುವ ಅಪಾಯದಿಂದ ಪ್ರಜ್ಞಾ ಪೂರ್ವಕವಾಗಿ ತಪ್ಪಿಸಿಕೊಂಡು ಫ್ರೆಂಚ್ ಭಾಷೆಯಲ್ಲಿ ಬರೆಯತೊಡಗಿದ. ಭಾಷೆಯ ಬಗ್ಗೆ ಈತನಿಗಿದ್ದ ವಿಶೇಷ ಆಸಕ್ತಿಗೆ ಜಾಯ್ಸ್‍ನ ಸಹವಾಸ ಪೋಷಕವಾಯಿತು. ಅನೇಕ ಐರೋಪ್ಯ ಭಾಷೆಗಳನ್ನು ಕಲಿತರೂ ವಿಶೇಷ ಪರಿಣತಿ ಇದ್ದದ್ದು ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಮಾತ್ರ. 

	ಎರಡನೆಯ ಮಹಾಯುದ್ಧಕ್ಕೆ ಮೊದಲು ಮರ್ಫಿ ಎಂಬ ಕಾದಂಬರಿಯನ್ನೂ ಯುದ್ಧಕಾಲದಲ್ಲಿ ವಾಟ್ ಎಂಬ ಇಂಗ್ಲಿಷ್ ಕಾದಂಬರಿಯನ್ನೂ ಬರೆದ. ಮರ್ಫಿ 1938ರಲ್ಲಿ ಪ್ರಕಟವಾಯಿತು. ಯುದ್ಧಾನಂತರ ರಚಿತವಾದ ಕೃತಿಗಳು ಶ್ರೇಷ್ಠವಾಗಿವೆ. ಅವುಗಳಲ್ಲಿ ಯುದ್ಧದಿಂದ ಗಾಸಿಗೊಂಡ ಯೂರೊಪಿನ ಸಾಮಾಜಿಕ ಮಾನಸಿಕ ವಾತಾವರಣದ ಚಿತ್ರಣವಿಲ್ಲ; ಮಾನವನ ಪತನದ ಚಿತ್ರಣವಿದೆ. ಮನುಷ್ಯ ಹೇಗೆ ತಾನೂ ಸಂಕಟಪಡುತ್ತ ಇತರರಿಗೂ ಸಂಕಟಕೊಡುವನೆಂಬುದೇ ಈ ಕೃತಿಗಳ ವಸ್ತು. ಮೊಲ್ಲಾಯ್ (1915) ಮೆಲೋನ್ ಮ್ಯೂಯರ್ಟ್ (1952) ಮತ್ತು ಲಾ ಇನ್ನೋಮಬಲ್ (1953) ಎಂಬ ಕಾದಂಬರಿತ್ರಯವನ್ನು ಫ್ರೆಂಚ್‍ನಲ್ಲಿ ರಚಿಸಿದ. 

	1952ರಲ್ಲಿ ಎನ್ ಅಟೆಂಡೆಂಟ್ ಗಾಡೊ ಎಂಬ ಹೊಸ ಬಗೆಯ ನಾಟಕ ಬರೆದ ರಂಗಭೂಮಿಯ ಮೇಲೆ ಅವರ ಮೊದಲ ಪ್ರದರ್ಶನ ಇಡೀ ಲಂಡನ್ನಿನಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿತು. ಅನಂತರ ಮುನ್ನೂರು ಪ್ರದರ್ಶನಗಳನ್ನು ಕಂಡಿತು. ಬೆಕೆಟ್ ತಾನೇ ಈ ನಾಟಕವನ್ನು ಇಂಗ್ಲಿಷಿಗೆ ಅನುವಾದಿಸಿ ನಾಟಕ ಆಡಿಸಿದಾಗ ದೊರೆತ ಪ್ರತಿಕ್ರಿಯೆ ಉತ್ಸಾಹದಾಯಕವಾಗಿರಲಿಲ್ಲ. ಆದರೆ ಪಾಶ್ಚಾತ್ಯ ನಾಟಕ ರಂಗದಲ್ಲಿ ಇದು ಹೊಸ ಅಲೆಯ ಅಸಂಗತ ನಾಟಕ ರಚನೆಗೆ ನಾಂದಿಯಾಯಿತು. ಅಸಂಗತ ನಾಟಕ ಶಾಲೆಯೂ ರೂಪುಗೊಂಡಿತು. 

	1957ರಲ್ಲಿ ಆಲ್ ದಟ್ ಫಾಲ್, 1959ರಲ್ಲಿ ಕ್ರ್ಯಾಪ್ಸ್ ಲಾಸ್ ಟೇಪ್, 1961ರಲ್ಲಿ ಕಾಮೆಂಟ್ ಸಿ ಎಸ್ಟ್ ಎಂಬ ಕೃತಿಗಳು ಬಂದುವು. 1969ರಲ್ಲಿ ಬೆಕೆಟ್‍ನ ಶ್ರೇಷ್ಠ ಸಾಹಿತ್ಯಕ್ಕೆ ದೊರೆತ ವಿಶ್ವಮನ್ನಣೆಯಾಗಿ ನೊಬೆಲ್ ಪಾರಿತೋಷಕ ಬಂದಿತು. ಯೋಗ್ಯತೆಗೆ ದೊರೆತ ತಕ್ಕ ಪುರಸ್ಕಾರ. ಗಾಡೊ ನಾಟಕದ ಧಾಟಿಯಲ್ಲೇ ಬಂದ ಇನ್ನೊಂದು ನಾಟಕ ಫಿನ್ ಡಿ ಪಾರ್ಟಿ (1907). ಈತನ ಸಣ್ಣಕಥಾ ಸಂಕಲನ ಡ್ರೀಮ್ಸ್ ಆಫ್ ಫೇರ್ ಟು ಮಿಡ್ಲಿಂಗ್ ವಿಮೆನ್. 

	ಜೀವನದ ಬಗೆಗೆ ಈತನ ದೃಷ್ಟಿ ಮತ್ತು ಈತನ, ವಿಚಾರ ಸರಣಿಗಳಲ್ಲಿ ಬಹುಮಟ್ಟಿಗೆ ನಿರಾಶಾವಾದವೇ ಹೊಮ್ಮುತ್ತದೆ. ಬದುಕಿಗೆ ಯಾವ ಅರ್ಥವೂ ಇಲ್ಲ. ಈ ಅರ್ಥಶೂನ್ಯತೆಯನ್ನು ಅಭಿವ್ಯಕ್ತಿಸುವುದಕ್ಕೆ ತಕ್ಕ ಸಾಮಥ್ರ್ಯ ಭಾಷೆಗೂ ಇಲ್ಲ. ಬದುಕನ್ನು ಅರ್ಥಪೂರ್ಣವಾಗಿ ಮಾಡುವ ಪ್ರಯತ್ನದ ವೈಫಲ್ಯದ ಜೊತೆಗೆ ಅಭಿವ್ಯಕ್ತಿ ವೈಫಲ್ಯವೂ ಸೇರಿಕೊಂಡಂಥ ದಿಕ್ಕೆಟ್ಟ ಸಂಕಟ ಪರಿಸ್ಥಿತಿಯಲ್ಲಿ ಆಧುನಿಕ ಮಾನವ ಸಿಕ್ಕಿಕೊಂಡಿರುವನೆಂಬುದೇ ಬೆಕೆಟ್‍ನ ಚಿಂತನದ ನಿರ್ಣಯ. ಆತನ ಕಥೆ, ಕಾದಂಬರಿ, ನಾಟಕಗಳಲ್ಲೆಲ್ಲ ಜೀವನದ ಎಲ್ಲ ತತ್ತ್ವಗಳ, ಸಿದ್ಧಾಂತಗಳ, ಪ್ರಯತ್ನಗಳ ಹಾಗೂ ಭರವಸೆಗಳ ದಿವಾಳಿತನ ಮತ್ತು ಮಾನವನ ಪೇಚಿನ ಸ್ಥಿತಿ ಅಭಿವ್ಯಕ್ತವಾಗಿವೆ. ಸೂಕ್ಷ್ಮ ಸಂವೇದನಾಶೀಲನಾದ ಮನುಷ್ಯ ಬದುಕಿನಲ್ಲಿ ಎದುರಿಸ ಬೇಕಾಗಿರುವ ಭೀಕರ ಏಕಾಂತತೆ, ಇಚ್ಛಾಶಕ್ತಿಯ ನಿಷ್ಕ್ರಿಯತೆ ದಿಗಿಲುಗೊಳಿಸುವ ಶೂನ್ಯತೆ ಸಮಗ್ರ ಜೀವನದ ದುರಂತವನ್ನೇ ಅನುಭವಕ್ಕೆ ತರುತ್ತವೆ. 

	ವೇಯ್ಟಿಂಗ್ ಫಾರ್ ದಿ ಗಾಡೊ ಈತನ ಶ್ರೇಷ್ಠ ಕೃತಿ. ಬೆಕೆಟ್‍ನ ಜೀವನ ತತ್ತ್ವ ಈ ನಾಟಕದಲ್ಲಿ ಹರಳು ಗಟ್ಟಿದೆ. ಆ ಕಾರಣ ಈತನ ಜೀವನದೃಷ್ಟಿಯ ಪ್ರಾತಿನಿಧಿಕ ಕೃತಿಯೂ ಆಗಿದೆ. ಈ ವಿಷಾದ ಛಾಯೆಯ ಹರ್ಷಕದಲ್ಲಿ ಐದೇ ಪಾತ್ರಗಳು. ಇಬ್ಬರು ದಿಕ್ಕೆಟ್ಟ ದಾರಿಗರು ರಸ್ತೆ ಬದಿಯಲ್ಲಿ ನಿಂತು ಮಾತಾಡಿ ಕೊಳ್ಳುತ್ತಾರೆ. ಅದೊಂದು ನಿಗೂಢ ಸನ್ನಿವೇಶ. ಗಾಡೋನ ಆಗಮನಕ್ಕಾಗಿ ತೀವ್ರ ಪ್ರತೀಕ್ಷೆಯಿಂದ ಕಾಯುತ್ತಾರೆ. ಆತ ಕೊನೆಗೂ ಬರುವುದೇ ಇಲ್ಲ. ಇವರ ಸಂಕಟ ಹತಾಶೆ ತೀವ್ರವಾಗಿ ಪರಾಕಾಷ್ಠೆಯನ್ನು ಮುಟ್ಟುತ್ತದೆ. 

	ಈ ನಾಟಕವೂ ಬೆಕೆಟ್‍ನ ಇತರ ಕಾದಂಬರಿಗಳಂತೆ ರೂಪರಹಿತವಾದುದು. ವಿಶಿಷ್ಟವಾದ ರಚನೆಯೇನೊ ಇದೆ. ಆದರೆ ತರ್ಕಬದ್ಧ-ಸುಸಂಬದ್ದ-ಸಂಭಾಷಣಾ ಸರಣಿ ಮಾತ್ರ ಇಲ್ಲ. ವಿಚಾರಗಳ ನಡುವೆ ಜೋಡಣೆಯ ಕೊಂಡಿಗಳಿಲ್ಲ. ಬಿಗಿಯಾದ ಕಾವ್ಯಮಯವಾದ ಭಾಷೆ, ಪ್ರಜ್ಞಾವಾಹಿನಿಯ ತಂತ್ರದ ಬಳಕೆಯನ್ನು ಕಾಣುತ್ತೇವೆ. ಅನೇಕ ಸಂಕೇತಗಳು ತೀರ ವೈಯಕ್ತಿಕವಾಗಿ ಅರ್ಥವಾಗದ ಒಗಟುಗಳಾಗುತ್ತವೆ. ನಿರಾಶಾವಾದದ ವಿಷಾದ ತುಂಬಿದ್ದರೂ ನಾಟಕದುದ್ದಕ್ಕೂ ಮಿನಿಗುವ ವಿನೋದಶೀಲತೆ ವಿಸ್ಮಯಕರವಾದುದು. ಈ ನಾಟಕದಿಂದ ಬೆಕೆಟ್ ನಾಟಕ ರಂಗಕ್ಕೊಂದು ಚಕಿತಗೊಳಿಸುವ ನವ್ಯತೆಯ ತಿರುವನ್ನು ಕೊಟ್ಟು “ಅಸಂಬದ್ಧ ನಾಟಕ” ಎಂಬ ಹೊಸ ಮಾದರಿಯನ್ನಾರಂಭಿಸಿದ. 							
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ